ಮೋಸಕ್ಕೆ ಶಿಕ್ಷೆ

ಕಿಟ್ಟಣ್ಣ ಮತ್ತು ಪುಟ್ಟಣ್ಣ ಇಬ್ಬರೂ ಬಾಲ್ಯ ಸ್ನೇಹಿತರು. ಇಬ್ಬರೂ ಒಂದೇ ಶಾಲೆಗೆ ಹೋದವರು, ಒಂದೇ ತರಗತಿ­ಯಲ್ಲಿ ಇದ್ದವರು. ಇಬ್ಬರೂ ಒಂದೇ ಬಾರಿಗೆ ಏಳನೇ ತರಗತಿಯಲ್ಲಿ ನಪಾಸಾ­ದರು. ಇಬ್ಬರೂ ಕೂಡಿಯೇ ಊರಿನಲ್ಲಿ ಕಳ್ಳತನ ಮಾಡಿ, ಸಿಕ್ಕಿಹಾಕಿಕೊಂಡು ಹೊಡೆತ ತಿಂದರು, ಕೆಲಸವಿಲ್ಲದೇ ತಿರುಗಾಡಿದರು.

ಯಾರೋ ಅವರ ತಲೆ ತುಂಬಿದರು  ಎಸ್.ಎಸ್.ಎಲ್.ಸಿ ಪಾಸಾಗಲು ಬುದ್ಧಿ ಬೇಕಿಲ್ಲ, ಹದಿನಾರು ವರ್ಷ ವಯಸ್ಸಾದರೆ ಸಾಕು ಎಂದು. ಇಬ್ಬರೂ ಕೂಡಿಯೇ ಪರೀಕ್ಷೆಗೆ ಕಟ್ಟಿದರು. ಆತ್ಮೀಯ ಸ್ನೇಹಿತರಲ್ಲವೇ? ಇಬ್ಬರೂ ಜೊತೆಗೇ ಫೇಲಾದರು. ಮತ್ತೆ ಮೂರು ಬಾರಿ ಕುಳಿತು ಮೂರು ಬಾರಿಯೂ ಯಾರಿಗೂ ನಿರಾಸೆಯಾ­ಗದಂತೆ ನಪಾಸಾದರು. ಕೊನೆಗೆ ತಮಗೂ, ಶಿಕ್ಷಣಕ್ಕೂ ಹೊಂದಾಣಿಕೆ­ಯಾಗದೆಂದು ತೀರ್ಮಾನಿಸಿ ಶಿಕ್ಷಣವನ್ನು ಮುಕ್ತಗೊಳಿಸಿದರು.

ಅವರು ಸುಮ್ಮನೆ ಕೂಡ್ರುವವರಲ್ಲ. ಕಿಟ್ಟಣ್ಣ ಮತ್ತು ಪುಟ್ಟಣ್ಣ ಆಗಾಗ ಊರಿಗೆ ಮುಖ ತೋರಿಸುತ್ತಿದ್ದ ಪುಡಿ ರಾಜಕಾರಣಿಗಳ ಹಿಂದೆ ಓಡಾಡುತ್ತ ಜನರಿಗೆ ಆಶ್ವಾಸನೆ ನೀಡುತ್ತ ಮೆರೆಯುತ್ತಿದ್ದರು. ಸಣ್ಣ ಸಣ್ಣ ವ್ಯಾಪಾರಸ್ಥರ ಮೇಲೆ ಅವರ ಜೋರು ಹೆಚ್ಚು. ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಗುಂಡಪ್ಪನ ಹೋಟೆಲ್ಲಿಗೆ ದಿನಾಲು ಸಾಯಂಕಾಲ ಹೋಗುವರು. ಆತ ಮಾಡುವ ಬ್ರೆಡ್ ಸ್ಯಾಂಡ್‌ವಿಚ್ ಅವರಿಗೆ ಅತ್ಯಂತ ಪ್ರಿಯವಾದದ್ದು. ಅದರಲ್ಲೂ ಆತ ಜೇನುತುಪ್ಪ ಹಾಕಿ ಕೊಡುವ ಸ್ಯಾಂಡ್‌ವಿಚ್ ಅವರನ್ನು ಎಳೆಯುತ್ತಿತ್ತು. ಇವರಿಬ್ಬರೂ ಪಂಚಾಯತಿಯವರನ್ನು ಹೆದರಿಸಿ, ಬೆದರಿಸಿ ಗುಂಡಪ್ಪನಿಗೆ ಅಂಗಡಿ ಹಾಕಿಸಿಕೊಟ್ಟಿದ್ದರಿಂದ ಆತ ಋಣಿಯಾಗಿ ಇವರಿಗೆ ದಿನವೂ ಪುಕ್ಕಟೆ ಸ್ಯಾಂಡ್‌ವಿಚ್ ಕೊಡುತ್ತಿದ್ದ.

ಒಂದು ದಿನ ಎಂದಿನಂತೆ ಗುಂಡಪ್ಪನ ಅಂಗಡಿಗೆ ಇಬ್ಬರೂ   ಹೋದರು. ಅವನೂ ಇವರಿಗೆ ಸ್ಯಾಂಡ್‌­ವಿಚ್ ಮಾಡಲು ಸಿದ್ಧನಾಗುತ್ತಿದ್ದಂತೆ ಅವನ ಮಗ ಶೀನ ಓಡಿಬಂದ. ಬಂದವನೇ ಜೋರಾಗಿ ಕೂಗಿದ, ‘ಅಪ್ಪಾ, ಬೇಗನೇ ಮನೆಗೆ ಬಾ. ಅಮ್ಮ ಜಾರಿ ಬಿದ್ದಿದ್ದಾಳೆ. ಏಳಲೂ ಆಗುತ್ತಿಲ್ಲ’ ಹೀಗೆ ಕೂಗಿ ಮತ್ತೆ ಮರಳಿ ಓಡಿದ. ಗುಂಡಪ್ಪ ಗಾಬರಿಯಾದ. ‘ಸಾಹೇಬರೇ, ನಾನು ಮನೆಗೆ ಹೋಗಿ ನೋಡಿಕೊಂಡು ಬಂದುಬಿಡುತ್ತೇನೆ. ದಯವಿಟ್ಟು ಕುಳಿತಿರಿ’ ಎಂದವನೇ ಓಡಿದ. ಇಬ್ಬರೂ ಅಂಗಡಿಯಲ್ಲೇ ಉಳಿದರು. ಅಂಗಡಿ­ಯಲ್ಲಿ ಯಾರೂ ಇಲ್ಲದ್ದರಿಂದ ಎಲ್ಲ ಕಡೆಗೆ ನೋಡತೊಡಗಿದರು.

ಅಂಗಡಿಯ ಹಿಂದಿನ ಕೊಠಡಿಗೆ ಹೋದರು. ಅಲ್ಲಿ ಎಲ್ಲ ಪದಾರ್ಥಗಳನ್ನು ಓರಣವಾಗಿ ಜೋಡಿಸಿಡಲಾಗಿತ್ತು. ಕೈ ಹಾಕಿ ಗೋಡಂಬಿ, ದ್ರಾಕ್ಷಿಗಳನ್ನು ಮನದಣಿಯೆ ತಿಂದರು. ಪಕ್ಕದಲ್ಲೇ ಜೇನುತುಪ್ಪದ ಬಾಟಲಿ ಇತ್ತು. ಅದು ಮುಕ್ಕಾಲು ಭಾಗ ತುಂಬಿದೆ. ಅದನ್ನು ಗುಂಡಪ್ಪ ಯಾವಾ­ಗಲೂ ಉಪಯೋಗಿಸಿದಂತೆ ಕಾಣಲಿಲ್ಲ. ಹೊರಗಡೆ ಇದ್ದ ಡಬ್ಬಿಯಿಂದಲೇ ಜೇನುತುಪ್ಪ ತೆಗೆದುಕೊಂಡು ಸ್ಯಾಂಡ್‌­ವಿಚ್ ಮಾಡುತ್ತಿದ್ದ. ಇವನು ಕಳ್ಳ, ಒಳ್ಳೆಯ ಜೇನುತುಪ್ಪ ಒಳಗೆ ಇಟ್ಟುಕೊಂಡು ಯಾವುದೋ ಹಳೆಯ ಜೇನಿನಿಂದ ನಮಗೆ ಸ್ಯಾಂಡ್‌ವಿಚ್ ಮಾಡಿಕೊಡುತ್ತಾನೆ ಎಂದು ಕೋಪ­ದಿಂದ ಬಾಟಲಿಯಲ್ಲಿಯ ಜೇನನ್ನು ತಟ್ಟೆಗೆ ಸುರಿದುಕೊಂಡು ಅದರಲ್ಲಿ ನಾಲ್ಕಾರು ಬ್ರೆಡ್ ತುಣುಕುಗಳನ್ನು ನೆನಸಿಕೊಂಡು ತಿಂದು ಸಂತೋಷ­ಪಟ್ಟರು. ನಂತರ ಜೇನು ಕಡಿಮೆ­ಯಾದದ್ದು ಅವನಿಗೆ ತಿಳಿಯ­ಬಾರದೆಂದು ಪಕ್ಕದ ಅಂಗಡಿಯಿಂದ ಅರ್ಧ ಸೇರು ಹರಳೆಣ್ಣೆಯನ್ನು ತಂದು ಅದಕ್ಕೆ ಬೆರೆಸಿ ಮೊದಲಿನ ಮಟ್ಟಕ್ಕೆ ತಂದು ಅಲ್ಲಿಟ್ಟರು. ಸ್ವಲ್ಪ ಹೊತ್ತಿಗೆ ಗುಂಡಪ್ಪ ಬಂದ. ಹೆಂಡತಿಗೆ ಹೆಚ್ಚಿನ ಪೆಟ್ಟೇನೂ ಆಗಿಲ್ಲ ಎಂದು ಹೇಳುತ್ತ ಅವರಿಗೆ ಸ್ಯಾಂಡ್‌ವಿಚ್ ಮಾಡಿಕೊಟ್ಟ.

ಮರುದಿನ ಇಬ್ಬರಿಗೂ ಭೇದಿ ಹಾಗು ಹೊಟ್ಟೆನೋವು. ನಿನ್ನೆ ಅಷ್ಟು ಹೆಚ್ಚು ಜೇನುತುಪ್ಪ ತಿನ್ನಬಾರದಿತ್ತು ಎಂದು­ಕೊಂಡರು. ಮಾಮೂಲಿನಂತೆ ಸಂಜೆ ಸ್ಯಾಂಡ್‌ವಿಚ್ ಸೇವನೆಯಾಯಿತು. ಮುಂದಿನ ಮೂರು ದಿನ ಕಿಟ್ಟಣ್ಣ, ಪುಟ್ಟಣ್ಣರ ಪರಿಸ್ಥಿತಿ ತುಂಬ ಬಿಗಡಾ­ಯಿಸಿತು. ಅತಿಭೇದಿಯಾಗಿ ಮೇಲೆ ಏಳುವುದೇ ಅಸಾಧ್ಯವಾಯಿತು. ಅಂದು ಸಂಜೆ ಗುಂಡಪ್ಪನ ಹೋಟೆಲ್ಲಿಗೆ ಹೋಗಿ ಒಳಕೋಣೆಯಲ್ಲಿ ಕುಳಿತಾಗ ಅವರ ಕಣ್ಣು ಜೇನುತುಪ್ಪದ ಬಾಟಲಿಯ ಮೇಲೆ ಬಿತ್ತು.

ಜೇನುತುಪ್ಪದ ಮಟ್ಟ ಕಡಿಮೆಯಾಗಿದೆ. ಕಿಟ್ಟಣ್ಣ ಕೇಳಿದ, ‘ಗುಂಡಪ್ಪಾ, ಹೊರಗೆ ಡಬ್ಬಿಯಲ್ಲಿಯ ಜೇನನ್ನು ಎಲ್ಲರಿಗೂ ಕೊಟ್ಟು ನೀನು ಮಾತ್ರ ಈ ಬಾಟಲಿಯ ಒಳ್ಳೆಯ ಜೇನನ್ನು ತಿನ್ನುತ್ತೀಯಾ?’ ಗುಂಡಪ್ಪ ಗಲ್ಲಗಲ್ಲ ಬಡಿದುಕೊಂಡು ಹೇಳಿದ, ‘ಎಲ್ಲಾದರೂ ಉಂಟೇ ಸಾಹೇಬರೇ? ನೀವಿಬ್ಬರೂ ನನಗೆ ದೇವರಿದ್ದಂತೆ.

ಊರಿನವರಿಗೆಲ್ಲ ಹೊರಗಿನ ಡಬ್ಬಿಯಲ್ಲಿಯ ಜೇನನ್ನೇ ಹಾಕಿ, ಈ ಒಳಗಿನ ಜೇನನ್ನು ಕೇವಲ ನಿಮ್ಮಿಬ್ಬರಿಗೆ ಮಾತ್ರ ಬಳಸುತ್ತೇನೆ’ ಇಬ್ಬರ ಕಣ್ಣು ಬೆಳ್ಳಗಾದವು!   ನಾವು ಯಾರಿಗೋ ಮೋಸಮಾಡಬೇಕೆಂದು ಹೋಗುತ್ತೇವೆ, ಅನ್ಯಾಯ ಮಾಡು­ತ್ತೇವೆ. ಆದರೆ ನಾವು ಎಷ್ಟು ಅನ್ಯಾಯ ಮಾಡುತ್ತೇವೋ ಅದರ ಎರಡುಪಟ್ಟು ಅನ್ಯಾಯ, ಮೋಸ ನಮಗಾಗು­ತ್ತದೆಂಬುದು ತಿಳಿಯುವುದಿಲ್ಲ, ಈ ಶಿಕ್ಷೆ ತಕ್ಷಣವೇ ಆಗಬಹುದು, ಇಲ್ಲ ಕೆಲಸಮಯದ ನಂತರ ಆಗಬಹುದು. ಇದೊಂದು ಪರಮಸತ್ಯ. ನಾವು ಮಾಡಿದ ಪಾಪಕ್ಕೆ ಎರಡು ಪಟ್ಟು ಶಿಕ್ಷೆ  ಅನುಭವಿಸಲೇಬೇಕಾಗುತ್ತದೆ.

http://www.prajavani.net/columns/ಮೋಸಕ್ಕೆ-ಶಿಕ್ಷೆ

Advertisements
This entry was posted in Moral Stories. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s