ಸ್ನೇಹಿತರೋ, ಶತ್ರುಗಳೋ?

 

ನಮ್ಮ ಗಜರಾಜನಿಗೆ ಸ್ನೇಹಿತರು ಪ್ರೀತಿಯಿಂದ ಜೂಜುರಾಜ ಎಂದು ಹೆಸರಿಟ್ಟಿದ್ದಾರೆ. ಆತ ಹುಟ್ಟಿದ ಯಾವ ವರ್ಷದಲ್ಲಿ ಜೂಜು ಆಡುವುದನ್ನು ಕಲಿತನೋ ತಿಳಿಯದು. ಕೆಲವರಂತೂ ಗಜರಾಜ ಹುಟ್ಟಿದಾಗಲೇ ಜೂಜಿನಲ್ಲಿ ಪರಿಣತನಾಗಿ ಹುಟ್ಟಿದ್ದ ಎಂದು ವಾದಿಸುತ್ತಾರೆ. ಅವನು ಜೂಜಿನಲ್ಲಿ­ರಬೇಕು ಇಲ್ಲವೇ ಜೂಜಿಗೆ ದುಡ್ಡು ಹೊಂದಿಸಲು ಓಡಾಡುತ್ತಿರಬೇಕು. ಬೇರೆ ಯಾವ ಚಟುವಟಿಕೆಗಳಲ್ಲಿಯೂ ಅವನನ್ನು ಕಂಡವರಿಲ್ಲ.

ಒಂದು ದಿನ ಸಂಜೆ ಜೂಜಿನ ಅಡ್ಡೆಗೆ ಹೋದ. ಜೇಬಿನಲ್ಲಿ ಸ್ವಲ್ಪ ದುಡ್ಡಿದೆ. ಮೊದಲನೆಯ ಆಟದಲ್ಲಿ ಹೂಡಿದ ಹಣದ ದುಪ್ಪಟ್ಟು ಹಣ ಬಂದಿತು. ಅವನ ಉತ್ಸಾಹ ನಾಲ್ಕು ಮಡಿಯಾ­ಯಿತು. ತನ್ನ ಎಲ್ಲ ಹಣವನ್ನು ಮತ್ತೆ ಒಡ್ಡಿದ. ಅದು ಮತ್ತೆ ಎರಡು ಪಟ್ಟಾಯಿತು. ಇಂದು ತನ್ನ ವಿಜಯದ ಗಳಿಗೆ, ಆದಷ್ಟನ್ನು ಗಳಿಸಿಯೇ­ಬಿಡ ಬೇಕೆಂದು, ತನ್ನದಾದ ಮತ್ತು ಇದುವರೆಗೂ ಬಂದ ಹಣವನ್ನು ಒಂದೇ ಆಟಕ್ಕೆ ಪಣವಾಗಿಟ್ಟ. ಆಟ ಒದೆದುಕೊಂಡು ಹೋಯಿತು. ಅವನ ಬಳಿ ಒಂದು ಕಾಸೂ ಇಲ್ಲ. ಮತ್ತೊಂದು ಆಟವಾಡುವುದು ಹೋಗಲಿ, ರಾತ್ರಿ ಊಟಕ್ಕೆ, ಮನೆ ತಲು ಪಲು ದುಡ್ಡಿಲ್ಲ. ಕೈ ಜಾಡಿಸಿಕೊಂಡು ಹೊರಗೆ ಬಂದ. ಎದುರಿಗೆ ಅವನ ಗೆಳೆಯ ಸಿದ್ದಣ್ಣ ಬಂದ. ಅವನ ಮುಖದಲ್ಲಿ ಗೆಲುವಿನ ಸುರಿಮಳೆ ಕಂಡಿತು.

‘ಯಾಕೆ ಜೂಜುರಾಜ ಮುಖ ಸಣ್ಣದಾಗಿದೆ?’ ಎಂದು ಕೇಳಿದ. ಗಜರಾಜ, ‘ಏನಿಲ್ಲ, ಈವೊತ್ತು ಸ್ವಲ್ಪ ಟೈಂ ಸರಿಯಾಗಿರಲಿಲ್ಲ. ಎಲ್ಲ ಕೊಚ್ಚಿಕೊಂಡು ಹೋಯಿತು. ಈಗ ಮನೆ ತಲುಪಲೂ ಕಾಸಿಲ್ಲ’ ಎಂದ. ಸಿದ್ದಣ್ಣ ತನ್ನ ಪಕ್ಕದಲ್ಲಿದ್ದ ಶೀನನ ಮುಖ ನೋಡಿದ. ಅವರೇನೋ ಕಣ್ಸನ್ನೆಯಲ್ಲೇ ಮಾತನಾಡಿಕೊಂಡಂತೆ ಎನ್ನಿಸಿತು. ಸಿದ್ದಣ್ಣ ತನ್ನ ಜೇಬಿನಿಂದ ನೂರು ರೂಪಾಯಿ ನೋಟು ತೆಗೆದು, ‘ಜೂಜುರಾಜ, ತಗೊ ಈ ನೂರು ರೂಪಾಯಿ. ನನಗೆ ನಂತರ ಮರಳಿ ಕೊಡುವೆಯಂತೆ’ ಎಂದ. ಥ್ಯಾಂಕ್ಸ್ ಎಂದು ಹೇಳಿ ಗಜರಾಜ ಮನೆಯ ಕಡೆಗೆ ನಡೆದ.

ರಾತ್ರಿ ತಡವಾದ್ದರಿಂದ ಯಾವ ಆಟೊ ರಿಕ್ಷಾ ಕೂಡ ಇರಲಿಲ್ಲ. ಗೊಣಗುತ್ತ ಗಜರಾಜ ಹೊರಟ. ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಒಬ್ಬ ಮಹಿಳೆ ಎದುರು ಬಂದಳು. ಕೆದರಿದ ಕೂದಲು, ಮಾಸಲಾದ ಬಟ್ಟೆ, ಮುಖದಲ್ಲಿ ನೋವು. ‘ಅಣ್ಣಾ, ನನ್ನ ಗಂಡ ನನ್ನನ್ನು ಬಿಟ್ಟು ಊರಿಗೆ ಹೋಗಿ ಸಾಯಂಕಾಲ ಬರುತ್ತೇನೆಂದವನು ಇನ್ನೂ ಬಂದಿಲ್ಲ. ಯಾವಾಗ ಬರುತ್ತಾನೋ ತಿಳಿಯದು. ಹೊಟ್ಟೆ ಹಸಿದು ಕಂಗಾಲಾಗಿದೆ. ನನಗೊಂದಿಷ್ಟು ದುಡ್ಡು ಕೊಡ್ತೀಯಾ ಅಣ್ಣಾ?’ ಎಂದು ಅಂಗಲಾಚಿದಳು. ಈತ ಈ ಹೊತ್ತಿನಲ್ಲೂ ಭಿಕ್ಷುಕರು ಗಂಟುಬೀಳು­ತ್ತಾ­ರಲ್ಲ ಎಂದು ಬೇಜಾರು ಮಾಡಿ ಕೊಂಡು ಮುಂದೆ ಹೊರಟ. ಆಕೆ ಬಿಡಬೇಕಲ್ಲ. ‘ಅಣ್ಣಾ, ನಾನು ಭಿಕ್ಷುಕಿ ಅಲ್ಲ. ನಾವು ತಕ್ಕಮಟ್ಟಿಗೆ ಭದ್ರವಾಗಿಯೇ ಇರುವವರು. ಪರಿಸ್ಥಿತಿ ಹೀಗೆ ಬಂದಿದೆ. ದಯ ವಿಟ್ಟು ಸಹಾಯ ಮಾಡು’ ಎಂದು ಬೇಡಿದಳು. ಗಜರಾಜನಿಗೆ ಹೆದರಿಕೆ. ಆಕೆ ಯಾರೋ ತಿಳಿಯದು. ಹೀಗೆ ರಾತ್ರಿಯಲ್ಲಿ ಒಂಟಿ ಹೆಣ್ಣುಮಗಳು ಹೀಗೆ ಬೆನ್ನತ್ತಿ ಬರುತ್ತಿದ್ದರೆ ಅಪಾಯ ಎಂದುಕೊಂಡು ಜೇಬಿನಲ್ಲಿ ಸಿದ್ದಣ್ಣ ಕೊಟ್ಟ ನೂರು ರೂಪಾಯಿಯನ್ನು ಆಕೆಯ ಕೈಗಿತ್ತು ಅಲ್ಲಿಂದ ಜಾಗ ಖಾಲಿ ಮಾಡಿದ.

ಮರುದಿನ ಬೆಳಿಗ್ಗೆ ಎದ್ದು ಪೇಪರ ಓದುತ್ತಿದ್ದ. ಅಲ್ಲೊಂದು ಪೋಲೀಸ್ ಸುದ್ದಿ. ನಗರದಲ್ಲಿ ಖೋಟಾ ನೋಟು ಜಾಲವನ್ನು ಹರಡುತ್ತಿದ್ದ ಮಹಿಳೆ ಎಂಬ ಶೀರ್ಷಿಕೆಯ ಅಡಿ ಒಬ್ಬ ಮಹಿಳೆಯ ಭಾವಚಿತ್ರ ಪ್ರಕಟವಾಗಿತ್ತು. ಅರೇ! ಈಕೆ ಅದೇ ಮಹಿಳೆ! ಯಾರು ಗಜರಾಜನ ಬೆನ್ನುಹತ್ತಿ, ಕಾಡಿ, ನೂರು ರೂಪಾಯಿ ಪಡೆದಿದ್ದಳೋ ಆಕೆಯೇ ಈಕೆ! ಅವಸರದಿಂದ ವಿಷಯ ಓದಿದ.

ನಿನ್ನೆ ರಾತ್ರಿ ಈ ಮಹಿಳೆ ಅಂಗಡಿಯಲ್ಲಿ ನೂರು ರೂಪಾಯಿ ಖೋಟಾ ನೋಟನ್ನು ಚಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಆಕೆಗೆ ಹಣ ನೀಡಿದವರ ಪತ್ತೆಗೆ ಯತ್ನ ನಡೆಸಲಾಗುತ್ತ್ತಿದೆ. ಗಜರಾಜನ ತಲೆ ಗಿರ್ರೆಂದಿತು. ಆಗ ಅವನಿಗೆ ತನಗೆ ದುಡ್ಡು ಕೊಡುವ ಮೊದಲು ಸಿದ್ದಣ್ಣ ತನ್ನ ಸ್ನೇಹಿತನೊಡನೆ ನಡೆಸಿದ ಕಣ್ಣು ಸಂಭಾ ಷಣೆಯ ಅರಿವಾಯಿತು. ಚಂಡಾಲ ಸಿದ್ದಣ್ಣ ನನ್ನನ್ನು ಬಲಿಹಾಕಲು ನೋಡಿದ್ದ ಎಂದು ಕೋಪ ಉಕ್ಕೇರಿತು. ಮಹಿಳೆಯ ಬಗ್ಗೆ ಕನಿಕರವೂ ಮೂಡಿತು.

ಸಮಾಜ ದಲ್ಲಿ ಜನ ಹೀಗೆಯೇ ಮಾಡಿಯಾರು ಎಂದು ಹೇಳುವುದು ಕಷ್ಟ. ನಿಮ್ಮ ಕಷ್ಟದ ಸಮಯಕ್ಕೆ ಕರಗಿದಂತೆ ಮಾಡಿ ಸಹಾಯಮಾಡುವ­ವರು ನಿಮ್ಮ ಮಿತ್ರರಾಗಿರಲಿಕ್ಕಿಲ್ಲ ಮತ್ತು ನಿಮ್ಮನ್ನು ಕಾಡಿ ಬೇಡಿ ನಿಮ್ಮಿಂದ ಸಹಾಯ ಪಡೆದವರು ನಿಮ್ಮ ಶತ್ರುಗಳೂ ಆಗಿರಲಿಕ್ಕಿಲ್ಲ. ಸರಿಯಾಗಿ ವಿವೇಕದಿಂದ ನೋಡಿದಾಗ ಸ್ನೇಹಿತರಾರು, ಶತ್ರು­ಗಳಾರು ಎಂಬ ವಿಷಯ ನಿಶ್ಚಿತವಾಗು­ತ್ತದೆ.


www.prajavani.net/columns/
ಸ್ನೇಹಿತರೋ-ಶತ್ರುಗಳೋ

Advertisements
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s