ಸತ್ಯ ಹೇಳುವ ಬಗೆ

ಅದೊಂದು ಬಹುದೊಡ್ಡ, ರಮ್ಯ­ವಾದ ಮೃಗಾಲಯ. ಎಲ್ಲ ಪ್ರಾಣಿಗಳು ಸಂತೋಷವಾಗಿ ಬದುಕಿದ್ದವು. ಎಲ್ಲ ಅರಣ್ಯಗಳಂತೆ ಇಲ್ಲಿಯೂ ಸಿಂಹವೇ ರಾಜ. ಇತ್ತೀಚಿಗೆ ಯಾಕೋ ಸಿಂಹರಾಜ­ನಿಗೆ ಮನಸ್ಸಿನಲ್ಲಿ ಕಿರಿಕಿರಿಯಾಗುತ್ತಿತ್ತು. ತನ್ನ ರಾಜ್ಯದ ಪ್ರಾಣಿಗಳು ತನ್ನ ಹತ್ತಿರ ಬರಲು ಹಿಂದೆ ಮುಂದೆ ನೋಡುತ್ತಿವೆ ಎನ್ನಿಸುತ್ತಿತ್ತು. ಪಾಪ! ಅವುಗಳಿಗೆ ನನ್ನ ಭಯ ಇರುವುದು ಸಹಜ. ಅದು ಗೌರವವೂ ಇದ್ದಿರಬಹುದು. ಆದರೆ, ನಾನು ಕರೆದರೂ ಹತ್ತಿರ ಬರದಿರು­ವುದಕ್ಕೆ ಕಾರಣ ಏನು ಇರಬಹುದು?

ತಾನಾಗಿಯೇ ಕರೆದರೂ ಹತ್ತಿರ ಬಂದ ಪ್ರಾಣಿಗಳು ತಲೆತಗ್ಗಿಸಿ ಬೇಗನೇ ದೂರ ಓಡಿಹೋಗುವುದನ್ನು ಕಂಡರೆ ಬೇರೇನೋ ಕಾರಣವಿರಬೇಕು ಎನ್ನಿಸಿತು. ಕೆಲವರನ್ನು ಕೇಳಿಯೇ ಬಿಡಬೇಕು ಎಂದು ನಿರ್ಧಾರ ಮಾಡಿ ಹೊರಟಿತು. ಹಿಂದೆ ಕೈಕಟ್ಟಿಕೊಂಡು ಗಂಭೀರವಾಗಿ ಹೋಗುತ್ತಿದ್ದ ಸಿಂಹದ ಎದುರಿಗೆ ಒಂದು ನರಿ ಬಂದಿತು. ‘ಹೇ ನರಿ ಬಾ ಇಲ್ಲಿ, ನಿನಗೊಂದು ಪ್ರಶ್ನೆ ಕೇಳುತ್ತೇನೆ. ನೀನು ಪ್ರಾಮಾಣಿಕವಾಗಿ ಉತ್ತರ ಕೊಡಬೇಕು. ಯಾವ ಭಯವೂ ಬೇಡ. ಎಲ್ಲ ಪ್ರಾಣಿಗಳು ನನ್ನಿಂದ ದೂರವಾಗಿ ಓಡುತ್ತವೆ. ಇದಕ್ಕೆ ಕಾರಣವೇನು? ಇದು ಭಯವೋ, ಗೌರವವೋ ಅಥವಾ ನನ್ನ ಬಾಯಿಯಿಂದ ದುರ್ನಾತ ಬರುತ್ತ­ದೆಯೋ?’ ಎಂದು ಕೇಳಿತು ಸಿಂಹರಾಜ. ನರಿ ತಲೆತಗ್ಗಿಸಿಕೊಂಡು ದೂರಸರಿದು, ‘ಮಹಾರಾಜಾ, ಭಯವೂ ಇದೆ, ಗೌರವವೂ ಇದೆ. ಆದರೆ, ಬಾಯಿಯ ವಾಸನೆಯ ಬಗ್ಗೆ ನಾನೇನೂ ಹೇಳಲಾರೆ. ಯಾಕೆಂದರೆ ಮೂರು ದಿನಗಳಿಂದ ನನಗೆ ಭಾರಿ   ನೆಗಡಿ’ ಎಂದು ಪೊದೆಯೊಳಗೆ ಓಡಿ­ಹೋಯಿತು.

ಸಿಂಹ ನಡೆದು ಇತ್ತೀಚಿಗೆ ಆಫ್ರಿಕೆ­ಯಿಂದ ಬಂದ ಹೆಣ್ಣು ಸಿಂಹದ ಬಳಿಗೆ ಹೋಯಿತು. ಅದು ರಾಜನ ಇತ್ತೀಚಿನ ಪ್ರೇಯಸಿ. ಪರದೇಶದವಳು ತಾನೇ? ಅವಳ ಮೇಲೆ ರಾಜನಿಗೆ ವಿಶೇಷ ಪ್ರೀತಿ. ಸಿಂಹ ಕೇಳಿತು, ‘ಯಾಕೆ ಎಲ್ಲ ಪ್ರಾಣಿಗಳು ನನ್ನಿಂದ ದೂರ ಹೋಗುತ್ತಿದ್ದಾರೆ?’ ಪರದೇಶದ ಸಿಂಹಣಿಯದು ಯಾವಾ­ಗಲೂ ನೇರ ಮಾತು, ‘ನಾನು ನಿನಗೆ ಮೊನ್ನೆಯೇ ಹೇಳಿದೆ. ನಿನ್ನ ಬಾಯಿ­ಯಿಂದ ದುರ್ವಾಸನೆ ಬರುತ್ತದೆ. ತಡೆದುಕೊಳ್ಳುವುದೇ ಅಸಾಧ್ಯ.

ಅದಕ್ಕೇ ನನ್ನ ಬಳಿ ಬರುವಾಗ ಲವಂಗವನ್ನೋ, ಮತ್ತಾವುದೋ ಸುಗಂಧವನ್ನೋ ಅಗಿದು ಬಾ ಎಂದು ಹೇಳಿದ್ದೆ’ ಎಂದಿತು. ಸಿಂಹರಾಜನಿಗೆ ಮುಖಭಂಗವಾದಂತಾಗಿ ತನ್ನ ಗುಹೆಗೆ ದುಮುದುಮಿಸುತ್ತಲೇ ಬಂದಿತು. ಹೆಂಡತಿಯನ್ನು ಜೋರಾಗಿ ಕೂಗಿ ಕರೆದು ಘರ್ಜಿಸಿತು, ‘ಏನೇ, ನನ್ನ ಬಾಯಿಯಿಂದ ದುರ್ವಾಸನೆ ಬರುತ್ತ­ದಂತೆ. ಎಲ್ಲ ಪ್ರಾಣಿಗಳು ನನ್ನಿಂದ ದೂರ ಹೋಗುತ್ತಿವೆ. ನೀನು ಏಕೆ ನನಗೆ ಈ ಮಾತನ್ನು ಹೇಳಲಿಲ್ಲ?’ ಸಿಂಹಿಣಿ ಮೆಲುವಾಗಿ ನಕ್ಕು ಹೇಳಿತು, ‘ಪ್ರಭೂ, ನನಗೇನು ಗೊತ್ತು ನಿಮ್ಮ ಬಾಯಿಯಿಂದ ಬರುವುದು ದುರ್ವಾಸನೆ ಎಂದು?
ನಾನೆಂದೂ ಬೇರೆ ಗಂಡು ಸಿಂಹಗಳ ಸಹವಾಸ ಮಾಡದಿದ್ದುದರಿಂದ ಎಲ್ಲ ಗಂಡು ಸಿಂಹಗಳ ಬಾಯಿಯಿಂದ ಇದೇ ತರಹದ ವಾಸನೆ ಬರುತ್ತದೆ ಎಂದು­ಕೊಂಡಿದ್ದೆ’.

ಸಿಂಹರಾಜ ಭಯಂಕರ­ವಾಗಿ ಗರ್ಜಿಸಿ ಮರಳಿ ಓಡಿದ. ತನ್ನ ಪರದೇಶದ ಪ್ರೇಯಸಿಯ ಕಡೆಗೆ ಹೋಗಿ, ‘ನಿನ್ನ ಬುದ್ಧಿಯೇ ಇಷ್ಟು. ನೀನು ಅನೇಕ ಗಂಡುಸಿಂಹಗಳೊಂದಿಗೆ ಓಡಾ­ಡಿದ್ದೀಯ. ಆದ್ದರಿಂದಲೇ ನೀನು ನನ್ನ ಬಾಯಿಯ ವಾಸನೆಯ ಬಗ್ಗೆ ಹೇಳುತ್ತಿದ್ದೀ’ ಎಂದು ಹಾರಿಬಿದ್ದು ಅದನ್ನು ಕೊಂದು ಹಾಕಿತು. ಇಲ್ಲಿ ಮೂರು ತರಹದ ಮಾತನಾಡುವ ಕಲೆಗಳಿವೆ. ನರಿಯದು ಜಾರಿಕೊಳ್ಳುವ, ಪಾರಾಗುವ ಮಾತಿನ ರೀತಿ. ಪರದೇಶದ ಸಿಂಹ ಸತ್ಯವನ್ನು ಹೇಳಿದರೂ ಅದನ್ನು ಒರಟಾಗಿ ಹೇಳಿ ಪ್ರಾಣ ಕಳೆದು­ಕೊಂಡಿತು. ರಾಣಿ ಸಿಂಹದ ಮಾತು ಬುದ್ಧಿವಂತಿಕೆಯದು. ಸತ್ಯವನ್ನು ಹೇಳಿ­ದರೂ ಅದು ಮನನೋಯದಂತೆ ಕಂಡರೂ ತನ್ನ ಸವತಿಯಾಗಿ ಬಂದ ಸಿಂಹಿಣಿಯನ್ನು ದೂರ ಮಾಡುವ ಜಾಣತನದ ಮಾತು. ಅದಕ್ಕೇ ಹಿರಿ­ಯರು ಹೇಳುತ್ತಾರೆ, ಸತ್ಯವನ್ನೇ ಹೇಳು ಆದರೆ ಅದನ್ನು ಒರಟಾಗಿ ಮನನೋಯದಂತೆ ಹೇಳು. ಆಗ ಅದು ಅಪೇಕ್ಷಿತ ಫಲವನ್ನು ನೀಡುತ್ತದೆ. ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್ ……

Advertisements
This entry was posted in Moral Stories. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s