ಕಾಣದ ಕೊಳಕು – ಹೃದಯದಲ್ಲಿಯ ಕೊಳಕಿಗೆ ವಾಸನೆ

ಅದೊಂದು ಪ್ರಾಥಮಿಕ ಶಾಲೆ. ಮಕ್ಕಳಲ್ಲಿ ಆಗಾಗ ಜಗಳ ಬರುವುದು ಸಾಮಾನ್ಯ. ಕೆಲವೊಮ್ಮೆ ಒಂದೊಂದು ಜಗಳ ದೀರ್ಘಕಾಲ ನಡೆಯು­ವುದೂ ಇತ್ತು. ಅದಕ್ಕಾಗಿ ತರಗತಿಯ ಶಿಕ್ಷಕಿ ಒಂದು ಆಟವನ್ನು ಯೋಜಿಸಿದರು. ಮರುದಿನ ಶಿಕ್ಷಕಿ ತರಗತಿಯ ಎಲ್ಲ ಮಕ್ಕಳಿಗೆ ಹೇಳಿದರು, ‘ಮಕ್ಕಳೇ, ನಾಳೆಯಿಂದ ಒಂದು ವಿಶೇಷ ಅಟವನ್ನು ಆಡೋಣ.

ನಾಳೆ ನೀವು ಶಾಲೆಗೆ ಬರುವಾಗ ಪ್ರತಿ­ಯೊ­ಬ್ಬರೂ ಒಂದು ಪ್ಲಾಸ್ಟಿಕ್ ಚೀಲವನ್ನು ತರಬೇಕು. ಅದರಲ್ಲಿ ಆಲೂಗಡ್ಡೆಗಳನ್ನು ತರಬೇಕು. ನಿಮಗೆ ನಿಮ್ಮ ತರಗತಿಯಲ್ಲಿ ಎಷ್ಟು ಜನರನ್ನು ಕಂಡರೆ ಇಷ್ಟವಿಲ್ಲವೋ ಅಷ್ಟು ಆಲೂಗಡ್ಡೆಗಳನ್ನು ಚೀಲದಲ್ಲಿ ತುಂಬಿ ತರಬೇಕು. ಅದಲ್ಲದೇ ಆ ಒಂದೊಂದು ಆಲೂಗಡ್ಡೆಯ ಮೇಲೂ ನಿಮಗೆ ಇಷ್ಟವಿಲ್ಲದ ಒಬ್ಬ ವ್ಯಕ್ತಿಯ ಹೆಸರನ್ನು ಬರೆಯಬೇಕು’. ಮಕ್ಕಳು ಉತ್ಸಾಹದಿಂದ ಒಪ್ಪಿದರು.

ಮರುದಿನ ಎಲ್ಲ ಮಕ್ಕಳೂ ಪ್ಲಾಸ್ಟಿಕ್ ಚೀಲ ಮತ್ತು ಆಲೂಗಡ್ಡೆ­ಗಳನ್ನು ತಂದಿದ್ದರು. ಕೆಲವು ಹುಡುಗರು ಎರಡು ಆಲೂಗಡ್ಡೆ ತಂದಿದ್ದರೆ, ಕೆಲವರು ಮೂರು, ಕೆಲವರು ನಾಲ್ಕು ತಂದಿದ್ದರು. ಒಬ್ಬ ಹತ್ತು ಆಲೂಗಡ್ಡೆ ತಂದಿದ್ದ. ಪ್ರತಿಯೊಂದು ಆಲೂಗಡ್ಡೆಯ ಮೇಲೆ ತಮಗಿಷ್ಟವಿಲ್ಲದ ವಿದ್ಯಾರ್ಥಿಯ ಹೆಸರನ್ನು ಕಪ್ಪು ಮಸಿ­ಯಲ್ಲಿ ಬರೆದಿದ್ದರು.

ಒಬ್ಬ ಹುಡುಗಿ ಮಾತ್ರ ಕೇವಲ ಪ್ಲಾಸ್ಟಿಕ್ ಚೀಲ ತಂದಿದ್ದಳು. ಯಾಕೆ ಆಲೂಗಡ್ಡೆ ತರಲಿಲ್ಲ ಎಂದು ಶಿಕ್ಷಕಿ ಕೇಳಿದಾಗ ಆಕೆ ಮುಗ್ಧವಾಗಿ, ‘ಮ್ಯಾಡಂ ನನಗೆ ಎಲ್ಲರನ್ನೂ ಕಂಡರೆ ಇಷ್ಟ. ಯಾರ ಬಗ್ಗೆಯೂ ಸಿಟ್ಟಿಲ್ಲ’. ಶಿಕ್ಷಕಿ ನಕ್ಕರು.

ನಂತರ ಎಲ್ಲ ಮಕ್ಕಳಿಗೆ ಹೇಳಿದರು, ‘ಈ ಕ್ಷಣದಿಂದ ನಮ್ಮ ಆಟ ಶುರು. ನೀವು ಆಲೂಗಡ್ಡೆಗಳನ್ನು ಹಾಕಿದ ಪ್ಲಾಸ್ಟಿಕ್ ಚೀಲವನ್ನು ಯಾವ ಕ್ಷಣವೂ ಬಿಟ್ಟಿರು­ವಂತಿಲ್ಲ. ಅದು ಸದಾ ನಿಮ್ಮೊಂದಿಗೇ ಇರಬೇಕು. ನೀವು ಶೌಚಕ್ಕೆ ಹೋದಾಗ, ಸ್ನಾನಕ್ಕೆ ಹೋದಾಗ ಕೂಡ ಇದು ನಿಮ್ಮ ಜೊತೆಗೇ ಇರಬೇಕು. ಶಾಲೆಗೆ ಬರುವಾಗ, ತಂದೆ-ತಾಯಿಯರೊಂದಿಗೆ ಹೊರಗೆ ಹೋದಾಗಲೂ ಅದು ನಿಮ್ಮ ಕೈ ಬಿಡುವಂತಿಲ್ಲ ಮಕ್ಕಳು ಉತ್ಸಾಹದಿಂದ, ಕುತೂಹಲದಿಂದ ಕುಣಿದರು.

ಎರಡು ದಿನಗಳಲ್ಲಿ ಈ ಪ್ಲಾಸ್ಟಿಕ್ ಚೀಲದ ಸಹವಾಸ ಸಾಕಾಯಿತು ಮಕ್ಕಳಿಗೆ. ಈ ಭಾರವನ್ನು ಹೊರುವು­ದರೊಂದಿಗೆ, ನೀರಲ್ಲಿ ನೆನೆದು, ಬಿಸಿಲಿನಲ್ಲಿ ಒಣಗಿದ ಈ ಆಲೂಗಡ್ಡೆಗಳು ಸೂಸುವ ಕೊಳಕು ವಾಸನೆಯನ್ನು ತಡೆದುಕೊಳ್ಳುವುದು ಅಸಾಧ್ಯ­ವಾಗಿತ್ತು. ಅದನ್ನು ಬಿಟ್ಟುಬಿಡೋಣವೇ ಎಂದರೆ ಶಿಕ್ಷಕಿ ಇನ್ನೂ ಕೆಲವೊಂದು ದಿನ ಹೀಗೆಯೇ ಮುಂದುವರಿಯಲಿ ಎಂದರು. ಗೊಣಗಿಕೊಂಡು ಮಕ್ಕಳು ನಡೆದರು.

ಅವರಿಗೆ ಆಟದಲ್ಲಿ ಆಸಕ್ತಿ ಇರಲಿಲ್ಲ, ಆದರೆ ಏನೂ ಮಾಡು­ವಂತಿಲ್ಲ. ಒಂದು ವಾರ ಆಗುವ ಹೊತ್ತಿಗೆ ಶಾಲೆಗೆ ಮಕ್ಕಳ ಜೊತೆಗೆ ಅವರ ಪಾಲಕರೂ ಬಂದರು. ಅವರದೆಲ್ಲ ಒಂದೇ ತಕರಾರು. ಈ ಆಲೂಗಡ್ಡೆಗಳನ್ನು ಮಕ್ಕಳು ಹೊರು­ವುದೇತಕೆ? ಇದೆಂಥ ಶಿಕ್ಷೆ? ಆಲೂಗಡ್ಡೆಗಳು ಕೊಳೆತು ಹೋಗಿವೆ, ಕೆಲವುಗಳಿಗೆ ಮೊಳಕೆ ಬಂದಿವೆ. ಅವುಗಳಿಂದ ಬರುವ ದುರ್ವಾಸನೆ ತಡೆಯಲ­ಸಾಧ್ಯವಾಗಿದೆ. ಮಕ್ಕಳಿಗೂ ಸಾಕು­ಸಾಕಾಗಿ ಹೋಗಿದೆ.

ಶಿಕ್ಷಕಿ ಆ ಪಾಲಕರನ್ನು ಹಾಗೂ ಮಕ್ಕಳನ್ನು ಒಂದು ಕೊಠಡಿಯಲ್ಲಿ ಕೂಡಿಸಿ ಹೇಳಿದರು, ‘ಈ ಆಟದ ಹಿಂದೆ ಒಂದು ತತ್ವವಿದೆ. ಮಕ್ಕಳು ಆಗಾಗ ಜಗಳವಾಡುತ್ತಿದ್ದರು, ಮತ್ತೊಬ್ಬರ ಬಗ್ಗೆ ಈರ್ಷ್ಯೆ, ಕೋಪ, ದ್ವೇಷಗಳು ಆಗಾಗ ಎದ್ದು ಕುಣಿಯು­ತ್ತಿದ್ದವು. ದ್ವೇಷ ಕೂಡ ಹೃದಯದಲ್ಲಿಯ ಕಸ. ಅದು ಕೊಳೆತು ಇಡೀ ಹೃದಯ  ಕೊಳಕಾಗಿಸು­ತ್ತವೆ.

ಕೊಳೆತ ಆಲೂ­ಗಡ್ಡೆಯ ವಾಸನೆಯನ್ನು ಐದು ದಿನಗಳ ಕಾಲ ಕೂಡ ಸಹಿಸ­ಲಾಗದ ನಾವು ಈ ದ್ವೇಷವನ್ನು, ಅಸೂಯೆಯನ್ನು ಹೇಗೆ ತಿಂಗಳು, ವರ್ಷಗಳ ಕಾಲ ಹೃದಯದಲ್ಲಿ ಪೋಷಿಸುತ್ತೇವೆ? ಆಲೂಗಡ್ಡೆಯ ಕೊಳಕು ದೇಹಕ್ಕೆ ತೊಂದರೆ ನೀಡಿದರೆ ಹೃದಯದಲ್ಲಿ ತುಂಬಿರುವ ಈ ಕೀಳು ಗುಣಗಳು ನಮ್ಮ ಜೀವನವನ್ನೇ ಅಸಹ್ಯವಾಗಿಸುತ್ತವೆ. ಅಲ್ಲವೇ?’ ಈ ಮಾತು ಮಕ್ಕಳಿಗೆಷ್ಟು ಅರ್ಥವಾಯಿತೋ ತಿಳಿಯದು.

ಆದರೆ ಪಾಲಕರಿಗೆ, ಹಿರಿಯರಿಗೆ ಖಂಡಿತವಾಗಿ ತಲುಪಿತು. ಆಲೂಗಡ್ಡೆಯ ಕೊಳಕು ವಾಸನೆ ಮೂಗನ್ನು ತಲುಪಿ ಎಚ್ಚರಿಸುತ್ತದೆ, ಹೊರಗೆ ಎಸೆಯುವಂತೆ ಪ್ರೇರೇಪಿ­ಸುತ್ತದೆ. ಆದರೆ, ಹೃದಯದಲ್ಲಿಯ ಕೊಳಕಿಗೆ ವಾಸನೆಯಿಲ್ಲ. ಅದು ತುಂಬಿ ಕೊಳೆಯುವುದು ಗೊತ್ತಾಗುವುದೇ ಇಲ್ಲ. ಆದ್ದರಿಂದ ಆಗಾಗ ಅಂತರೀಕ್ಷಣೆಯಿಂದ ನೋಡಿಕೊಂಡು ಎಷ್ಟೆಷ್ಟು ದ್ವೇಷ, ಕೋಪ, ಅಸೂಯೆಗಳು ಸೇರಿಕೊಂಡಿ­ವೆಯೋ ಅಷ್ಟಷ್ಟು ಹೊರಗೆ ಹಾಕಿ ಹಗುರವಾಗು­ವುದು ನಮ್ಮ ಬದುಕಿಗೇ ಆರೋಗ್ಯಕರ.

 

Advertisements
This entry was posted in Moral Stories. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s