ನಾಯಕರಿಗೂ, ಕಳ್ಳರಿಗೂ ಇರುವ ವ್ಯತ್ಯಾಸ

ಚಂದ್ರಗುಪ್ತನೆಂಬ ಹುಡುಗನಲ್ಲಿ ಛಲ ತುಂಬಿ, ಸಾಧನೆಯ ಕನಸು ಬಿತ್ತಿ ಅವನನ್ನು ಚಕ್ರವರ್ತಿಯನ್ನಾಗಿ ಮಾಡಿ­ದವನೇ ಚಾಣಕ್ಯ. ಆದರೆ, ಚಂದ್ರ­ಗುಪ್ತ ರಾಜನಾದರೂ ಅವನಲ್ಲಿ ಅಮಾತ್ಯ ಪದವಿ ಒಪ್ಪಿಕೊಂಡು ಸೇವೆ ಮಾಡಿ­­ದ­­ವನೂ ಅವನೇ.

ಚಕ್ರವರ್ತಿ ಬಂದು ಅವನ ಪಾದಗಳಿಗೆ ನಮಸ್ಕರಿಸು­ತ್ತಿದ್ದರೂ ಅಹಂಕಾರದಿಂದ ಬೀಗದೇ ಸದಾ ರಾಜ್ಯದ ಆಶಯಗಳಿಗೆ ಒತ್ತಾಸೆಯಾಗಿ ನಿಂತವನು ಚಾಣಕ್ಯ. ಯಾವಾಗಲೂ ಪ್ರಜೆಗಳಿಗೆ ಪ್ರಯೋಜನವಾಗುವ ಕೆಲಸ­ಗಳನ್ನು ಯೋಜಿಸುತ್ತ ಅವುಗಳನ್ನು ರಾಜನಿಂದ ಮಾಡಿಸುತ್ತಿದ್ದ ಚಾಣಕ್ಯ.

ಮುಂಬ­ರುವ ಚಳಿಗಾಲ ಉಗ್ರವಾಗುವ ಸೂಚನೆ ಇತ್ತು. ದೇಶದಲ್ಲಿರುವ ಅನೇಕ ಬಡವರು ಚಳಿಯನ್ನು ಹೇಗೆ ತಡೆದು­ಕೊಂಡಾರು? ಅವರಿಗೆ ಬೆಚ್ಚಗಿನ ಬಟ್ಟೆಯನ್ನು ಕಂಬಳಿ­ಗಳನ್ನು ಕೊಳ್ಳು­ವುದು ಹೇಗೆ ಸಾಧ್ಯವಾದೀತು? ಇದನ್ನು ಚಿಂತಿಸಿ ರಾಜನೊಂದಿಗೆ ಚರ್ಚಿಸಿದ ಚಾಣಕ್ಯ.

ಸಾವಿರಾರು ಕಂಬಳಿಗಳನ್ನು ನೇಯಿಸಿ ಚಳಿಗಾಲ ಕಾಲಿಡುವ ಮೊದಲೇ ಅವುಗಳನ್ನು ಬಡವರಿಗೆ ಹಂಚಿಬಿಡಲು ತೀರ್ಮಾನವಾಯಿತು. ದೇಶದ ಎಲ್ಲ ನೇಕಾರರಿಗೆ ಸೂಚನೆ ಹೋಗಿ ಸಾವಿರಾರು ಕಂಬಳಿಗಳು ಸಿದ್ಧವಾದವು.

ಈ ವಿಷಯ ಪಕ್ಕದ ದೇಶದ ರಾಜನಿಗೆ ತಿಳಿಯಿತು. ಅವನಿಗೆ ಈ ಯೋಚನೆ ಚೆನ್ನಾಗಿದೆ ಎನ್ನಿಸಿತು. ತಾನೂ ಅದನ್ನು ಮಾಡ­ಬೇಕೆಂದರೆ ತನ್ನ ಬಳಿ ಅಷ್ಟು ಹಣ­ವಿಲ್ಲ, ಅಷ್ಟೊಂದು ಜನ ನೇಕಾರರೂ ಇಲ್ಲ. ಆದರೆ ಕಂಬಳಿಗಳು ಬೇಕು. ಆತನಿಗೆ ಹೊಳೆ­ದದ್ದು ಒಂದೇ ದಾರಿ. ಹೇಗೂ ಚಂದ್ರಗುಪ್ತ ನೇಯಿಸಿ ಇಟ್ಟ ಕಂಬಳಿಗಳನ್ನು ಕದ್ದುಕೊಂಡು ಬಂದು ತನ್ನ ಜನರಿಗೆ ಕೊಡುವುದು. ಅದಕ್ಕಾಗಿ ಅತ ಸೇನಾಧಿಪತಿಗೆ ಹೇಳಿ ತಮ್ಮ ದೇಶ­ದಲ್ಲಿದ್ದ ಕಳ್ಳರ ಪ್ರಮುಖನನ್ನು ಕರೆಸಿದ. ಅವನಿಗೆ ಕಂಬಳಿಗಳನ್ನು ಕದಿಯಲು ಸೂಚನೆ ಕೊಟ್ಟ. ಸಾಮಾನ್ಯವಾಗಿ ಕಳ್ಳತನ ಮಾಡಿದರೆ ಶಿಕ್ಷೆ ನೀಡುವ ರಾಜ ಕಳ್ಳತನ ಮಾಡಲು ಹೇಳುವುದಲ್ಲದೇ ಕಳ್ಳತನ ಮಾಡಿದ್ದಕ್ಕೆ ಬಹುಮಾನವನ್ನು ಕೊಡುವುದನ್ನು ಕೇಳಿದ ಕಳ್ಳರ ಮುಖಂಡನಿಗೆ ಆಶ್ಚರ್ಯವಾಯಿತು. ಆತ ವೇಷ ಮರೆಸಿಕೊಂಡು ಚಂದ್ರ­ಗುಪ್ತನ ರಾಜ್ಯಕ್ಕೆ ಬಂದು ಮಾಹಿತಿ ತೆಗೆದಾಗ ಕಂಬಳಿಗಳೆಲ್ಲ ಅಮಾತ್ಯನಾದ ಚಾಣಕ್ಯನ ಮನೆಯಲ್ಲಿರುವುದು ತಿಳಿಯಿತು.

ರಾತ್ರಿ ಚಾಣಕ್ಯನ ಮನೆಗೆ ಕನ್ನ ಹಾಕಲು ಹೋದರೆ ಗೋಡೆಯೇ ಇಲ್ಲ. ಅದೊಂದು ಚಾಪೆಯ ಮನೆ. ಅದನ್ನು ಮನೆ ಎನ್ನುವುದಕ್ಕಿಂತ ಆಶ್ರಮ ಎನ್ನು­ವುದೇ ವಾಸಿ. ಒಳಗಡೆ ಹೋದರೆ ಕಟ್ಟೆಯ ಮೇಲೆ ಸಾವಿರಾರು ಕಂಬಳಿ­ಗಳನ್ನು ಜೋಡಿಸಿ ಇಟ್ಟಿ­ದ್ದಾರೆ. ಅಲ್ಲಿ ಸ್ವಲ್ಪ ದೂರದಲ್ಲಿ ಚಾಣಕ್ಯ ಮಲಗಿ­ದ್ದಾನೆ. ದೇಹವನ್ನು ಗೂಡು­ಮಾಡಿ­ಕೊಂಡು ಮಲಗಿದ ಚಾಣಕ್ಯನ ಕಂಬಳಿ ಅಲ್ಲಲ್ಲಿ ಹರಿದುಹೋಗಿದೆ. ಚಳಿಗೆ ಅವನ ದೇಹ ನಡುಗುತ್ತಿದೆ. ಕಳ್ಳ ಕಂಬಳಿಗಳ ಹತ್ತಿರ ಹೋದೊಡನೆ ಚಾಣಕ್ಯ ಎದ್ದು ಕುಳಿತು, ‘ಯಾರಪ್ಪ ನೀನು? ಏನು ಬೇಕಿತ್ತು?’ ಎಂದು ಕೇಳಿದ. ಒಬ್ಬ ಕಾವಲುಗಾರ­ನಿಗಿಂತ ಹೆಚ್ಚು ಚುರು­ಕಾಗಿದ್ದ ಚಾಣಕ್ಯನ ಮುಖದ ಮೇಲಿದ್ದ ತೇಜವನ್ನು ಕಂಡ ಕಳ್ಳ­ನಿಗೆ ಸುಳ್ಳು ಹೇಳಲಾಗಲಿಲ್ಲ. ತಾನು ಬಂದ ಉದ್ದೇಶವನ್ನು ತಿಳಿಸಿದ.

ನಂತರ ಕೇಳಿದ, ‘ಸ್ವಾಮೀ, ತಾವು ದೇಶದ ಅಮಾತ್ಯರು. ಅಷ್ಟೇ ಅಲ್ಲ ಚಕ್ರವರ್ತಿಗಳು ನಿಮ್ಮ ಶಿಷ್ಯರು. ಅಂಥದ್ದರಲ್ಲಿ ತಾವು ಈ ರೀತಿ ಗುಡಿಸಲಿನಲ್ಲಿ ಇರುವುದು, ಹರಕು ಕಂಬಳಿ ಹೊದ್ದು ಮಲಗಿರುವುದು ಆಶ್ಚರ್ಯವೆನ್ನಿಸುತ್ತದೆ. ಪಕ್ಕದಲ್ಲೇ ಇಷ್ಟೊಂದು ಹೊಸ ಕಂಬಳಿಗಳಿ­ರು­ವಾಗ ನೀವೇಕೆ ಹರಕು ಕಂಬಳಿ ಹೊದೆಯ­ಬೇಕೋ ತಿಳಿಯದು’ ಎಂದ.

ಆಗ ಚಾಣಕ್ಯ ಹೇಳಿದ, ‘ಆ ಕಂಬಳಿಗಳು ನನ್ನವಲ್ಲ, ರಾಜ್ಯದ್ದು, ಜನ ನೀಡಿದ ತೆರಿಗೆಯ ಹಣ­ದಿಂದ ಬಂದದ್ದು. ಇವೆಲ್ಲ ಬಡವರಿಗಾಗಿ ಮೀಸಲಾದದ್ದು. ಇದರಲ್ಲಿ ಒಂದು ಎಳೆ­ಯನ್ನಾದರೂ ನಾನು ತೆಗೆದುಕೊಂಡರೆ ನನಗೂ, ನಿನಗೂ ಯಾವ ವ್ಯತ್ಯಾಸವೂ ಇಲ್ಲ­ವಾ­ಗುತ್ತದೆ. ಆಗ ನಾನೂ ಒಬ್ಬ ಕಳ್ಳನೇ. ತನ್ನದಲ್ಲದ ವಸ್ತುವನ್ನು ಪಡೆಯು­ವವರೆಲ್ಲ ಕಳ್ಳರೇ’.

ಕಳ್ಳ ಚಾಣಕ್ಯನಿಗೆ ನಮಸ್ಕರಿಸಿ ತನ್ನ ರಾಜ್ಯಕ್ಕೆ ಹೋದ. ಮುಂದೆ ಕಳ್ಳತನವನ್ನು ಮಾಡುವುದನ್ನೇ ನಿಲ್ಲಿಸಿದ.  ಇದು ಜವಾಬ್ದಾರಿಯುತ ಸ್ಥಾನದಲ್ಲಿ­ರುವ ಜನರಿಂದ ಅಪೇಕ್ಷಿಸುವ ನೀತಿ. ಹಾಗೆ ಅವರು ಬದುಕಿದರೆ ಮಾತ್ರ ಅವರು ನಾಯಕರು. ಇಲ್ಲದೇ ಹೋದರೆ ಅವರು ಜೈಲಿನ ಹೊರಗೆ ಸ್ವಚ್ಛಂದವಾಗಿ ತಿರುಗಾ­ಡುವ ಕಳ್ಳರು. ಇಂದಲ್ಲ ನಾಳೆ ಒಳಗೆ ಹೋಗುವವರೇ, ಹೋಗಬೇಕಾ­ದವರೇ.

Advertisements
This entry was posted in Moral Stories. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s