ಎರಡು ಮುಖಗಳ ನಡುವಣ ಅಂತರ

ಇದು ಯಾರೂ ಮರೆಯಲಾರದ, ಮರೆಯಬಾರದ ಕಥೆ. ಆತನ ಹೆಸರು ಕರ್ಟ ಡೊನಾಲ್ಡ್‌ ಕೊಬೇನ್, ಆತ ಹುಟ್ಟಿದ್ದು ೧೯೬೭ ರ ಫೆಬ್ರವರಿ ಇಪ್ಪತ್ತರಂದು, ಅಮೆರಿಕೆಯ ಅಬರ್ಡೀನ್‌ನಲ್ಲಿ. ಆತನ ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಸಂಗೀತ ಇವನ ಜೀನ್ಸನಲ್ಲೇ ಇತ್ತೋ ಅಥವಾ ವಾತಾವರಣ­ದಿಂದ ಪಡೆದು­ಕೊಂಡಿದ್ದೋ ತಿಳಿಯದು.

ತುಂಬ ಸಂತೋಷವಾಗಿರುತ್ತಿದ್ದ ಹುಡುಗ ಚೆನ್ನಾಗಿ ಹಾಡುತ್ತಿದ್ದ. ಅದರೊಂದಿಗೆ ಅನೇಕ ವಾದ್ಯಗಳನ್ನು ಕಲಿತ. ಅದರಲ್ಲಿ ಗಿಟಾರ್ ಅವನಿಗೆ ಅತ್ಯಂತ ಪ್ರಿಯವಾಯಿತು. ಆದರೆ ಅವನು ಏಳು ವರ್ಷದ­ವನಿದ್ದಾಗ ಅವನ ತಂದೆ-ತಾಯಿಯರು ಬೇರ್ಪಟ್ಟರು. ತಂದೆ ಮತ್ತೊಬ್ಬಳನ್ನು ಮದುವೆಯಾದ. ತಾಯಿ ಮತ್ತೊಬ್ಬನೊಡನೆ ಸರಸ ನಡೆಸಿ­ದಳು. ಇದು ಸದಾ ಸಂತೋಷದ ಚಿಲುಮೆಯಾಗಿದ್ದ ಹುಡುಗನ ಮೇಲೆ ಭಾರ  ಪರಿಣಾಮವನ್ನುಮಾಡಿತು.

ಆತ ಒದ್ದಾಡಿಹೋದ. ಎರಡು ಕಡೆಗೂ ಪ್ರೇಮ­ವನ್ನು ಪಡೆಯದೆ ಚಡಪಡಿಸಿತು ಜೀವ. ಅಲ್ಲಿಂದ ಅವನ ಜೀವನ ರೀತಿಯೇ ಬೇರೆ­ಯಾಯಿತು. ಶಾಲೆಯಲ್ಲಿ ಅವನ ತುಂಟಾಟ ಬಲಿತು ದುರ್ನಡತೆ­ಯಾಯಿತು. ಒಳಗಿನ ಸಂಕಟ ಹೊರಗಿನ ಚಡಪಡಿಕೆಗೆ ಕಾರಣವಾಯಿತು. ಕ್ರಿಶ್ಚಿಯನ್ ಧರ್ಮವನ್ನು ತೊರೆದು ಬೌದ್ಧ, ಜೈನಧರ್ಮಗಳನ್ನು ಸೇರಲು ಬಯಸಿದ. ಇವನ ತಹತಹಿಕೆಯನ್ನು ಒಂದು ಹದಕ್ಕೆ ತಂದದ್ದು ಅವನ ಸಂಗೀತ.

ತನ್ನ ಬೌದ್ಧ ಧರ್ಮದ ಪ್ರೀತಿಯಿಂದ ನಿರ್ವಾಣ ಎಂಬ ಸಂಗೀತಗಾರರ ತಂಡವನ್ನು ೧೯೮೬ ರಲ್ಲಿ ಕಟ್ಟಿಕೊಂಡ ಕೊಬೇನ್, ಬೇಗಬೇಗನೇ ಜನಪ್ರಿಯ­ತೆಯ ಮೆಟ್ಟಿಲುಗಳನ್ನೇರಿದ. ಅವನ ಮೊದಲನೇ ಅಲ್ಬಂ ಬ್ಲೀಚ್ ಜಗಮನ್ನಣೆಯನ್ನು ಗಳಿಸಿತು. ೧೯೯೦ ರ ದಶಕದಲ್ಲಿ ಅವನೊಬ್ಬ ದೇವತೆಯಂತೆ ಜನಕ್ಕೆ ಕಂಡಿದ್ದರೆ ಆಶ್ಚರ್ಯ­ವಿಲ್ಲ. ಅವನ ನೆವ್ಹರಮೈಂಡ್ ಅಲ್ಬಂ ಅಂತೂ ತರುಣರಿಗೆ ಹುಚ್ಚು ಹಚ್ಚಿಸಿತು. ಆತ ಕರ್ಟನಿ ಲವ್ ಎಂಬ  ಸಹಗಾಯಕಿ ಚೆಲುವೆಯ ಮದುವೆ­ಯಾದ. ಫ್ರಾನ್ಸಿಸ್ ಎಂಬ ಸುಂದರವಾದ ಹೆಣ್ಣುಮಗು­ವಾಯಿತು.

ಜೀವನದ ಇಪ್ಪತ್ತೇಳನೇ ವಯಸ್ಸಿನಲ್ಲೇ ಈ ಪರಿಯ ಜನಪ್ರಿಯತೆ, ಹಣ, ಬಂದಾಗ ಏನಾಗುತ್ತದೆ? ಆದರೆ ಕೊಬೇನ್‌ಗೆ ಆದದ್ದೇ ವಿಶೇಷವಾದದ್ದು. ಆತ ವಿಪರೀತ ಮಾದಕ ದೃವ್ಯಗಳನ್ನು ಸೇವಿಸತೊಡಗಿದ. ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸಿದ. ಅವನನ್ನು ಮಾದಕ­ದ್ರವ್ಯಗಳ ವ್ಯಸನದಿಂದ ಬಿಡಿಸಲು ವಿಶೇಷ ಆಸ್ಪತ್ರೆಗೆ ಸೇರಿಸಿದರು. ಆತ ಹೇಗೋ ಅಲ್ಲಿಂದ ಪಾರಾಗಿ ಹೋಗಿ ಅಲ್ಲಲ್ಲಿ ತಿರುಗಾಡಿದ. ನಂತರ ಯಾರಿಗೂ ತಿಳಿಯದಂತೆ ಸಿಯಾಟಲ್‌ನಲ್ಲಿದ್ದ ತನ್ನ ಬಂಗಲೆಗೆ ಹೋಗಿ ಯಾರನ್ನು ಕಾಣದೇ ಉಳಿದುಕೊಂಡ.

೧೯೯೪ ರ ಏಪ್ರಿಲ್ ಐದರಂದು ತನ್ನ ತಲೆಗೆ ಗುಂಡಿಟ್ಟು ಹೊಡೆದುಕೊಂಡು ಪ್ರಾಣಬಿಟ್ಟ. ಸಾಯುವ ಮೊದಲು ಒಂದು ದೀರ್ಘವಾದ ಮೃತ್ಯ ಪತ್ರವನ್ನು ಬರೆದಿದ್ದ. ಅದರಲ್ಲಿ ಆತ ಬರೆದ ವಿಷಯ ಚಿಂತನೆಗೆ ಹಚ್ಚುತ್ತದೆ. ಆತ ಹೇಳುತ್ತಾನೆ. ‘ನನಗೆ ಹೊರಗೆ ಮನ್ನಣೆ ದೊರೆತದ್ದು ಅಪಾರ. ಆ ಜನರು ನನ್ನ ಬಗ್ಗೆ ಹೊಂದಿದ ಆರಾಧನಾ ಭಾವ, ಆ ಹುಚ್ಚು ನನ್ನಲ್ಲಿ ಗಾಬರಿಯನ್ನುಂಟು ಮಾಡುತ್ತಿತ್ತು. ನಾನು ಅವರನ್ನು ಮೆಚ್ಚಿಸಲು ನಾಟಕ ಮಾಡುತ್ತಿದ್ದೇನೆ ಎನ್ನಿಸುತ್ತಿತ್ತು, ನಾನೊಬ್ಬ ಮೋಸಗಾರ ಎನ್ನಿಸತೊಡಗಿತು.

ಹೊರಗಡೆಯ ಸಂಭ್ರಮ ಹೆಚ್ಚಾದಂತೆ ಒಳಗಡೆಯ ನನ್ನ ಖಾಲಿತನ ಎದ್ದು ಹೊಡೆಯತೊಡಗಿತು. ಎರಡರ ನಡುವಣ ವ್ಯತ್ಯಾಸವನ್ನು, ಬೃಹತ್ ಅಂತರವನ್ನು ಸರಿದೂಗಿ­ಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಇದು ಹೀಗೆ ಬಹುಕಾಲ ನಡೆಯಲಾರದು, ನಡೆಯಬಾರದು. ಹೊರಗಡೆಯ ಸಂಭ್ರಮ, ಅಲಂಕಾರ, ಮೆರವಣಿಗೆಗಳು, ಆಂತಾರ್ಯದ ಸುಖವನ್ನು ಹೆಚಿಸಲಾರವು.

ಇದು ನಮ್ಮೆಲ್ಲರದೂ ಚಿಂತೆಯಾಗಬೇಕಲ್ಲವೇ? ನಾವು ಕನ್ನಡಿಯಲ್ಲಿ ನೋಡಿಕೊಳ್ಳುವ ಮುಖ ಅಂತರ್ಯದಲ್ಲೂ ಹಾಗೆಯೇ ಇದೆಯೋ ಎಂಬುದು ನಮಗೆ ಮಾತ್ರ ಗೊತ್ತು. ಅವೆರಡರ ನಡುವಣ ಅಂತರ ಹೆಚ್ಚಾದಷ್ಟು ಮನಸ್ಸಿನ ಸುಖ, ಸಂತೋಷ, ತೃಪ್ತಿ ಮಾಯವಾಗುತ್ತದೆ. ನಾವು ಸಂತೋಷವಾಗಿರಬೇಕಾದರೆ ಈ ಎರಡು ಮುಖಗಳ ನಡುವಣ ವ್ಯತ್ಯಾಸ ಆದಷ್ಟು ಕಡಿಮೆಯಾಗಬೇಕು. ಇದು ಅವಶ್ಯವಷ್ಟೇ ಅಲ್ಲ, ಅನಿವಾರ್ಯವೂ ಹೌದು.

 

Advertisements
This entry was posted in Inspiration stories. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s